ದುರುಪಯೋಗ -
	ಯಾವನಾದರೂ ಒಬ್ಬ ಮತ್ತೊಬ್ಬನಿಗೆ ಸೇರಿದ ಯಾವುದಾದರೂ ಚರ ಸ್ವತ್ತನ್ನು ಅಕ್ರಮವಾಗಿ ಮತ್ತು ಅಪ್ರಾಮಾಣಿಕವಾಗಿ ಉಪಯೋಗಿಸಿಕೊಳ್ಳುವುದು ಅಥವಾ ಅದನ್ನು ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು (ಮಿಸ್‍ಅಪ್ರೋಪ್ರಿಯೇಷನ್). ಅಂಥ ಕೃತ್ಯ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೆನಿಸುತ್ತದೆ. ಅದು ಆಪರಾಧಿಕ ದುರುಪಯೋಗ. ಕಳವು, ಆಪರಾಧಿಕ ನ್ಯಾಸಭಂಗ (ಬ್ರೀಚ್ ಆಫ್ ಟ್ರಸ್ಟ್), ಆಪರಾಧಿಕ ದುರುಪಯೋಗ-ಇವು ಒಂದೇ ಬಗೆಯೆಂಬುದಾಗಿ ತೋರುವುವಾದರೂ ವಾಸ್ತವವಾಗಿ ಇವು ಮೂರೂ ವಿಭಿನ್ನ ಅಪರಾಧಗಳು. ಒಬ್ಬಾತ ಇನ್ನೊಬ್ಬನ ಸ್ವಾಧೀನದಲ್ಲಿರುವ ಚರ ಸ್ವತ್ತನ್ನು ತೆಗೆದುಕೊಳ್ಳಬೇಕೆಂಬ ದುರುದ್ದೇಶದಿಂದ, ಆ ಇನ್ನೊಬ್ಬನ ಒಪ್ಪಿಗೆಯಿಲ್ಲದೆ ಅದನ್ನು ಸ್ಥಳಾಂತರಿಸಿದಾಗ ಅವನು ಕಳವಿನ ಕೃತ್ಯ ಎಸಗುತ್ತಾನೆ. ಒಬ್ಬಾತ ಆಟವಾಡುವಾಗ ತನ್ನ ಕೈಗಡಿಯಾವರನ್ನು ನೋಡಿಕೊಳ್ಳುವ ಹೊಣೆಯನ್ನು ತನ್ನ ಕಾರಿನ ಚಾಲಕನಿಗೆ ವಹಿಸಿಕೊಡುತ್ತಾನೆ. ಚಾಲಕ ಆ ಗಡಿಯಾರದೊಂದಿಗೆ ಓಡಿಹೋಗುತ್ತಾನೆ. ಚಾಲಕನದು ಕಳವಿನ ಕೃತ್ಯ. ಒಂದು ಗಡಿಯಾರದ ಮಾಲೀಕ ಅದನ್ನು ಗಡಿಯಾರದ ದುರಸ್ತು ಮಾಡುವವನ ವಶಕ್ಕೆ ದುರಸ್ತಿಗಾಗಿ ಕೊಡುತ್ತಾನೆ. ದುರಸ್ತುದಾರ ಅದರೊಂದಿಗೆ ಪರಾರಿಯಾಗುತ್ತಾನೆ. ಇಲ್ಲಿ ದುರಸ್ತುದಾರನ ಕೃತ್ಯ ನ್ಯಾಸಭಂಗವೇ ವಿನಾ ಕಳವು ಅಲ್ಲ. ಏಕೆಂದರೆ ಗಡಿಯಾರ ದುರಸ್ತುದಾರನ ಸ್ವಾಧೀನದಲ್ಲಿದೆ. ಅವನು ಅದನ್ನು ಇನ್ನೊಬ್ಬನ ಸ್ವಾಧೀನದಿಂದ ಸ್ಥಳಾಂತರಿಸುವುದಿಲ್ಲ. ಒಬ್ಬ ಬೀದಿಯಲ್ಲಿ ಒಂದು ಗಡಿಯಾರ ಬಿದ್ದಿರುವುದನ್ನು ನೋಡುತ್ತಾನೆ. ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾನೆ. ಆ ಕಳೆದುಹೋದ ಗಡಿಯಾರದ ಮಾಲೀಕ ಯಾರೆಂಬುದು ಅವನಿಗೆ ಗೊತ್ತಾಗುತ್ತದೆ. ಆದರೂ ಅವನು ಗಡಿಯಾರವನ್ನೂ ಮಾಲೀಕನಿಗೆ ಹಿಂದಿರುಗಿಸದೆ ತಾನೇ ಇಟ್ಟುಕೊಳ್ಳುತ್ತಾನೆ. ಅಥವಾ ಅದರೊಂದಿಗೆ ಓಡಿಹೋಗುತ್ತಾನೆ. ಈ ಕೃತ್ಯ ಆಪರಾಧಿಕ ದುರುಪಯೋಗ. ಇದು ಕಳವಲ್ಲ. ಏಕೆಂದರೆ ಅವನು ಗಡಿಯಾರವನ್ನು ತೆಗೆದುಕೊಂಡಾಗ ಅದರ ಮಾಲೀಕ ಅದನ್ನು ಕಳೆದುಕೊಂಡಿದ್ದ. ಅದು ಯಾರ ಸ್ವಾಧೀನದಲ್ಲೂ ಇರಲಿಲ್ಲ. ಇದು ನ್ಯಾಸಭಂಗವೂ ಅಲ್ಲ. ಏಕೆಂದರೆ ಗಡಿಯಾರವನ್ನು ನೋಡಿಕೊಳ್ಳುವ ಹೊಣೆಯನ್ನು ಅವನಿಗೆ ವಹಿಸಿರಲಿಲ್ಲ. ಈ ಮೂರು ಅಪರಾಧಗಳಿಗೆ ಸಮಾನವಾದ ಒಂದು ಅಂಶವಿದೆ. ಅದು ದುರುದ್ದೇಶ. ಆ ಸ್ವತ್ತಿಗೆ ಹಕ್ಕಿಲ್ಲದಾಗ ಅವನು ಆ ಸ್ವತ್ತನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ; ಸ್ವತ್ತಿನ ಮೇಲೆ ಹಕ್ಕುಳ್ಳ ವ್ಯಕ್ತಿಗೆ ಅದರ ನಷ್ಟ ಆಗುವಂಥ ಎಸಕ. ಕಳೆದುಹೋದ ಗಡಿಯಾರದ ನಿಜವಾದ ಮಾಲೀಕನೆಂದು ಹೇಳಿಕೊಂಡವನು ನಿಜಕ್ಕೂ ಅದರ ಮಾಲೀಕನೇ? ಎಂಬ ಬಗ್ಗೆ ಆ ಗಡಿಯಾರವನ್ನು ತೆಗೆದುಕೊಂಡವನು ಸಂದೇಹ ವ್ಯಕ್ತಪಡಿಸಿ ಅದನ್ನು ಅವನಿಗೆ ಹಿಂದಿರುಗಿಸಲು ನಿರಾಕರಿಸಿದರೆ ಆಗ ಅವನು ಆಪರಾಧಿಕ ಕೃತ್ಯ ಮಾಡಿದನೆಂಬ ದೋಷಕ್ಕೆ ಒಳಗಾಗುವುದಿಲ್ಲ. ಅವನ ಮೇಲೆ ನಷ್ಟಪರಿಹಾರಕ್ಕಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವ ಹೂಡಬಹುದಷ್ಟೆ. 

ಒಬ್ಬ ವ್ಯಕ್ತಿ ಇನ್ನೊಬ್ಬನ ವಶದಲ್ಲಿರುವ ಒಂದು ಸ್ವತ್ತನ್ನು ಅದು ತನ್ನದೆ ಆಗಿರಬಹುದೆಂಬ ಭಾವನೆಯಿಂದ ತೆಗೆದುಕೊಳ್ಳುತ್ತಾನೆ. ಅಂಥ ವೇಳೆಯಲ್ಲಿ ಅವನು ದುರುಪಯೋಗದ ಕೃತ್ಯ ಎಸಗಿದನೆನ್ನಲಾಗುವುದಿಲ್ಲ. ಆದರೆ ಅವನು ತನ್ನ ತಪ್ಪಿನ ಅರಿವಾದ ಮೇಲೂ ಅಪ್ರಾಮಾಣಿಕವಾಗಿ ಆ ಸ್ವತ್ತನ್ನು ತನ್ನ ಸ್ವಂತಕ್ಕೇ ಉಪಯೋಗಿಸಿಕೊಂಡರೆ ಆಗ ಅವನು ದುರುಪಯೋಗದ ಅಪರಾಧ ಎಸಗಿದಂತೆ ಆಗುತ್ತದೆ. 

ಒಬ್ಬ ತನ್ನ ಸ್ನೇಹಿತನಾದ ಇನ್ನೊಬ್ಬನ ಗೈರುಹಾಜರಿಯಲ್ಲಿ ಆ ಇನ್ನೊಬ್ಬನ ಒಂದು ಪುಸ್ತಕವನ್ನು ಆತನ ಸಮ್ಮತಿಯಿಲ್ಲದೆ ತೆಗೆದುಕೊಂಡು ಹೋಗುತ್ತಾನೆ. ಆ ಎರಡನೆಯವನ ಪುಸ್ತಕವನ್ನು ಯಾವಾಗ ಬೇಕಾದರೂ ಓದಲು ತೆಗೆದುಕೊಂಡು ಹೋಗಲು ಅವನ ಸೂಚ್ಯ ಸಮ್ಮತಿಯಿದೆಯೆಂದು ಮೊದಲನೆಯವನು ತಿಳಿದುಕೊಳ್ಳುವುದಾದರೆ ಅದು ದುರುಪಯೋಗ ಎಂದು ಹೇಳಲು ಬರುವುದಿಲ್ಲ. ಆದರೆ ಮೊದಲನೆಯವನು ಹಾಗೆ ತಂದ ಪುಸ್ತಕವನ್ನು ಮತ್ತೊಬ್ಬನಿಗೆ ಮಾರಿ ಅದರಿಂದ ಬಂದ ಹಣವನ್ನು ತನ್ನ ಉಪಯೋಗಕ್ಕೆ ಬಳಸಿಕೊಂಡರೆ ಆಗ ಅವನ ಕೃತ್ಯ ದುರುಪಯೋಗವಾಗುತ್ತದೆ; ಮತ್ತು ಅದು ದಂಡಾರ್ಹವಾಗುತ್ತದೆ. ಇಬ್ಬರು ಒಂದು ಕುದುರೆಯ ಜಂಟಿ ಮಾಲೀಕರಾಗಿರುತ್ತಾರೆ. ಅವರಲ್ಲಿ ಒಬ್ಬಾತ ಇನ್ನೊಬ್ಬಾತನ ವಶದಲ್ಲಿದ್ದ ಆ ಕುದುರೆಯನ್ನು ಉಪಯೋಗ ಮಾಡಿಕೊಳ್ಳಲು ತೆಗೆದುಕೊಂಡುಹೋದರೆ ಅದು ಆಪರಾಧಿಕ ದುರುಪಯೋಗವಾಗದು. ಆದರೆ ಅವನು ಹಾಗೆ ತಂದ ಕುದುರೆಯನ್ನು ಮಾರಿ ಅದರಿಂದ ಬಂದ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡರೆ ಆಗ ಅದು ಆಪರಾಧಿಕ ದುರುಪಯೋಗವಾಗುತ್ತದೆ. 
ಸ್ವತ್ತಿನ ದುರುಪಯೋಗವನ್ನು ಅಪ್ರಾಮಾಣಿಕವಾಗಿ ಸ್ವಲ್ಪ ಕಾಲದ ಮಟ್ಟಿಗೆ ಮಾಡಿದರೂ ಅದು ಆಪರಾಧಿಕ ದುರುಪಯೋಗವೇ. ಉದಾಹರಣೆಗೆ, ಒಬ್ಬನ ಹೆಸರಿನಲ್ಲಿರುವ ಸರ್ಕಾರಿ ಪ್ರತಿಭೂತಿಯೊಂದು (ಸೆಕ್ಯೂರಿಟಿ) ಇನ್ನೊಬ್ಬನ ಕೈಗೆ ಸಿಗುತ್ತದೆ. ಆ ಎರಡನೆಯವನು ಅದನ್ನು ಅದರ ಒಡೆಯನಾದ ಮೊದಲನೆಯವನಿಗೆ ಮರಳಿಸಬೇಕೆಂದು ಮನಸ್ಸು ಮಾಡುತ್ತಾನೆ. ಆದರೆ, ಆ ನಡುವೆ ಎರಡನೆಯವನು ಅದರ ಆಧಾರದ ಮೇಲೆ ಹಣ ಪಡೆಯಲು ಅದನ್ನು ಒಂದು ಬ್ಯಾಂಕಿನಲ್ಲಿ ಒತ್ತೆ ಇಡುತ್ತಾನೆ. ಎರಡನೆಯವನ ಆ ಕೃತ್ಯ ದುರುಪಯೋಗವಾಗುತ್ತದೆ. 

ಯಾರಾದರೂ ಒಂದು ಸ್ವತ್ತು ಮತ್ತೊಬ್ಬನಿಗೆ ಅನಾಯಾಸವಾಗಿ ದೊರಕಿದರೆ ಅದನ್ನು ಅದರ ನಿಜವಾದ ಮಾಲೀಕನಿಗೆ ಹಿಂದಿರುಗಿಸುವ ಉದ್ದೇಶದಿಂದ ತನ್ನಲ್ಲಿಟ್ಟುಕೊಂಡರೆ ಆಗ ಅದು ಆಪರಾಧಿಕ ದುರುಪಯೋಗ ಆಗಲಾರದು; ಆದರೆ, ಅದರ ಮಾಲೀಕ ಯಾರೆಂದು ತಿಳಿದ ಮೇಲೂ ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡರೆ ಅಥವಾ ಅದರ ಮಾಲೀಕ ಯಾರೆಂದು ತಿಳಿಯುವವರೆಗೆ ಇಟ್ಟುಕೊಂಡಿದ್ದರೆ ಅದನ್ನು ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಂಡರೆ ಆಗ ಅದು ದುರುಪಯೋಗವಾಗುತ್ತದೆ. ಒಬ್ಬ ರಸ್ತೆಯಲ್ಲಿ ಹೋಗುತ್ತಿರುವಾಗ ರೂಪಾಯಿಯೊಂದು ಬಿದ್ದಿರುವುದನ್ನು ಕಾಣುತ್ತಾನೆ; ಅವನು ಅದನ್ನು ಎತ್ತಿಕೊಳ್ಳುತ್ತಾನೆ. ಮತ್ತು ಅವನು ಅದನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಅವನ ಈ ಕೃತ್ಯ ದುರುಪಯೋಗವಾಗದು. ಏಕೆಂದರೆ ಅವನಿಗೆ ಅದರ ಮಾಲೀಕ ಯಾರೆಂಬುದು ತಿಳಿಯದು. ಆದರೆ ಅವನಿಗೆ ರಸ್ತೆಯಲ್ಲಿ ಚೆಕ್ಕೊಂದು ಬಿದ್ದಿರುವುದು ಕಾಣುತ್ತದೆ; ಅವನು ಅದನ್ನು ಎತ್ತಿಕೊಳ್ಳುತ್ತಾನೆ; ಅದನ್ನು ಓದಿನೋಡಿದಾಗ ಅದು ಯಾರದೆಂಬ ವಿಷಯ ಅವನಿಗೆ ತಿಳಿದುಬರುತ್ತದೆ. ಅವನು ಅದನ್ನು ಅದರ ಧಾರಕನಿಗೆ ಮರಳಿಸುವುದನ್ನು ಬಿಟ್ಟು ತಾನೇ ಅದನ್ನು ಉಪಯೋಗಿಸಿಕೊಂಡರೆ ಅವನ ಆ ಕೃತ್ಯ ಆಪರಾಧಿಕ ದುರುಪಯೋಗವಾಗುತ್ತದೆ. ಒಬ್ಬನಿಗೆ ಒಂದು ಅಮೂಲ್ಯವಾದ ಉಂಗುರ ಸಿಕ್ಕುತ್ತದೆ. ಅದರ ಮಾಲೀಕ ಯಾರಿರಬಹುದೆಂದು ಅವನು ಹುಡುಕಿಸಿ ನೋಡುವುದಿಲ್ಲ. ಅದರ ಬದಲು ಅವನು ಅದನ್ನು ಮತ್ತೊಬ್ಬನಿಗೆ ಮಾರುತ್ತಾನೆ; ಮತ್ತು ಅದರಿಂದ ಬಂದ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಾನೆ. ಅವನದು ದುರುಪಯೋಗದ ಅಪರಾಧ. ಒಬ್ಬನಿಗೆ ಲಾಟರಿಯಲ್ಲಿ ಹಣ ಬಂದಿದ್ದರೆ ಅದನ್ನು ಗೆದ್ದವನಿಗೆ ಕೊಡದೆ ತಾನೇ ಇಟ್ಟುಕೊಂಡಿದ್ದಲ್ಲಿ ಅದು ಆಪರಾಧಿಕ ದುರುಪಯೋಗವೆಂದು ಪರಿಗಣಿಸಲು ಬರುವುದಿಲ್ಲವೆಂದು ಉಚ್ಚನ್ಯಾಯಾಲಯ ಒಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ತೀರ್ಪು ನೀಡಿದೆ. 

ಒಬ್ಬನ ಮೇಲೆ ಮಾಡಲಾದ ಆಪರಾಧಿಕ ದುರುಪಯೋಗದ ಆಪಾದನೆ ಕ್ರಿಮಿನಲ್ ನ್ಯಾಯಾಲಯದಲ್ಲಿ ಸಾಬೀತಾದರೆ ಅಂಥವನಿಗೆ ಎರಡು ವರ್ಷಗಳವರೆಗಿನ ಕಾಲಾವಧಿಯ ಯಾವುದೇ ವರ್ಣನೆಯ ಕಾರಾವಾಸ ಇಲ್ಲವೇ ದಂಡ ಇಲ್ಲವೇ ಅವೆರಡೂ ರೀತಿಯ ದಂಡನೆ ವಿಧಿಸಬಹುದು.
(ಎಸ್.ಎನ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ